Thursday, May 14, 2009

ಭಾರತ ತೊಂದರೆಯಲ್ಲಿದೆ ಏಕೆ ?!


ಭಾರತ ತೊಂದರೆಯಲ್ಲಿದೆ ಏಕೆ ?!
ಈ ಪ್ರಶ್ನೆಗೆ ಉತ್ತರವೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಅದನ್ನು ನಾನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ...
ನಮ್ಮ ದೇಶದ ಸ್ಥಿತಿ ನೋಡಿ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ ! ಜೈ ಹೋ...

ಏನಪ್ಪಾ ಅಂದ್ರೆ...
ದೇಶದಲ್ಲಿ ೧೦೦ ಕೋಟಿ ಜನಸಂಖ್ಯೆ ಇದೆ.
ಅದರಲ್ಲಿ ೯ ಕೋಟಿ ಮಂದಿ ನಿವೃತ್ತರು !
೩೦ ಕೋಟಿ ಮಂದಿ ರಾಜ್ಯ ಸರ್ಕಾರದಲ್ಲಿ ಇದ್ದಾರೆ; ೧೭ ಕೋಟಿ ಮಂದಿ ಕೇಂದ್ರ ಸರ್ಕಾರದಲ್ಲಿ ಇದ್ದಾರೆ. (ಎರಡೂ ವರ್ಗ ಕೆಲಸ ಮಾಡುವುದಿಲ್ಲ )
೧ ಕೋಟಿ ಐಟಿ ವೃತ್ತಿಪರರು (ಇವರು ಭಾರತ ದೇಶಕ್ಕಾಗಿ ಕೆಲಸ ಮಾಡುವುದಿಲ್ಲ )
೨೫ ಕೋಟಿ ಮಂದಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
೧ ಕೋಟಿ ಮಂದಿ ೫ ವರ್ಷ ಕೆಳಗಿನವರು.
೧೫ ಕೋಟಿ ಮಂದಿಗೆ ಉದ್ಯೋಗ ಸಿಕ್ಕಿಲ್ಲ.
ವಿವಿಧ ಕಾಯಿಲೆಯಿಂದ ೧.೨ ಕೋಟಿ ಮಂದಿ ಯಾವಾಗಲೂ ಆಸ್ಪತ್ರೆಯಲ್ಲಿ ಇರುತ್ತಾರೆ.
ಸಮೀಕ್ಷೆಗಳ ಪ್ರಕಾರ... ೭೯,೯೯,೯೯೮ ಮಂದಿ ಸದಾ ಜೈಲಿನಲ್ಲಿ ವಾಸಿಗಳು.
ಇನ್ನು ಉಳಿದವರು... ನಾನು ಮತ್ತು ನೀವು...
ನೀವೋ, ಕಂಪ್ಯೂಟರ್ ಮುಂದೆ ಕುಳಿತು ಮೇಲ್ ಚೆಕ್ ಮಾಡ್ತಾ ಇದ್ದೀರಾ... ಬ್ಲಾಗ್ ನೋಡ್ತಾ ಇದ್ದೀರಾ.
ಇನ್ನು ನಾನೊಬ್ಬ ಹೇಗೆ ಭಾರತವನ್ನು ಹ್ಯಾಂಡಲ್ ಮಾಡಲಿ, ನೀವೇ ಹೇಳಿ...!?



Monday, February 2, 2009

ಹಳ್ಳಿ ಹೈದನ ಅಂಬಾರಿ...!


ಇದಕ್ಕೆ ನಮ್ಮವರ ಮೇಲಿನ ಅಭಿಮಾನ ಕಾರಣ.
ನಮ್ಮ ಊರಿನವರು, ನಮ್ಮ ಜಿಲ್ಲೆಯವರು, ರಾಜ್ಯದವರು ಏನಾದರೂ ಸಾಧನೆ ಮಾಡಿದರೆ ನಾವೇ ಮಾಡಿದಷ್ಟು ಖುಷಿಯಾಗುತ್ತದೆ. ಈ ಖುಷಿಯ ಸಾಲಿಗೆ ಮೊನ್ನೆಯಷ್ಟೇ ಬಿಡುಗಡೆಯಾಗಿರವ ಅಂಬಾರಿ ಚಿತ್ರ ಕಾರಣವಾಗಿದೆ. ಏಕೆಂದರೆ, ಈ ಚಿತ್ರದ ನಿರ್ದೇಶಕ ನನ್ನ ಜಿಲ್ಲೆ ಸಕ್ಕರೆ ನಾಡು ಮಂಡ್ಯದ ಹುಡುಗ ಎ.ಪಿ. ಅರ್ಜುನ್ (ಅವರ ಹೆಸರು ಅನಂತ ಎಂದು ಅರ್ಜುನ್ ಆಗಿ ಬದಲಾಗಿದ್ದಾರೆ!). ನಮ್ಮೂರು ಪಂಚೇಗೌಡನದೊಡ್ಡಿಯ ಪಕ್ಕದ ಕೆರಗೋಡು ಗ್ರಾಮದವರು ಅವರು. ಅಂಬಾರಿ ಮೂಲಕ ಪ್ರೀತಿಯ ಜೊತೆಯಲ್ಲಿ ಉತ್ತಮ ಕಥೆಯೊಂದನ್ನು ಅವರು ಚಿತ್ರವಾಗಿ ಮಾಡಿದ್ದಾರೆ.
ಕಥೆ-ಚಿತ್ರಕಥೆ- ಸಂಭಾಷಣೆ- ಸಾಹಿತ್ಯ-ನಿರ್ದೇಶನದ ಅಂಬಾರಿಯನ್ನು ಹೊತ್ತಿರುವ ಅರ್ಜುನ್, ಚಿತ್ರದ ಮೂಲಕ
ಹೃದಯ ತಟ್ಟುತ್ತಾರೆ. ಪ್ರಥಮ ಪ್ರಯತ್ನದಲ್ಲಿಯೇ ಅವರು ಯುವಸಮೂಹವನ್ನು ಕಾಡಿದ್ದಾರೆ.
ಚಪ್ಪಲಿ ಹೊಲಿಯುವ ಯುವಕನನ್ನು ಸಹ ಹುಡುಗಿಯೊಬ್ಬಳು ಪ್ರೀತಿಸುತ್ತಾಳೆ. ಪ್ರೀತಿ ಕುರುಡು ಎಂಬುದು ಅಂಬಾರಿ
ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಉತ್ತಮ ಸಂಭಾಷಣೆ ಹಾಗೂ ಸಾಹಿತ್ಯದ ಮೂಲಕ ಅರ್ಜುನ್ ಇಷ್ಟವಾಗುತ್ತಾರೆ.
ಈ ಹೃದಯವನ್ನು ನೀನು ಇಷ್ಟು ದಿನ ನಡೆಸಿದ್ದೀಯಾ, ಇನ್ನು ನೀನು ಕೈ ಹಿಡಿದು ಕೈನಡೆಸದಿದ್ದರೆ ಹೃದಯವೇ ನಿಂತು ಹೋಗುತ್ತದೆ ಎಂಬ ಭಾವನಾತ್ಮಕ ಸಂಭಾಷಣೆ ಅರ್ಜುನ್ ಪೆನ್ನಿಂದ ಮೂಡಿಬಂದಿವೆ. ಎಂತಹ ಕಲ್ಪನೆಯಲ್ಲವೇ?
ಪ್ರೇಕ್ಷಕರನ್ನು ಎರಡೂವರೆ ಗಂಟೆ ಕಾಲ ಅವರು ಪ್ರೀತಿಯ ಜೊತೆಯಲ್ಲಿ ಕರೆದೊಯ್ಯುತ್ತಾರೆ. ನಡುವೆ ವಿಲನ್‌ಗಳನ್ನು ಬಿಟ್ಟು ಪ್ರೇಮಿಗಳಿಗೆ ಕಾಟ ಕೊಡುತ್ತಾರೆ. ಪೊಲೀಸರ ಅನಾಗರಿಕ ವರ್ತನೆಗೆ ಅಂಬಾರಿಯಲ್ಲಿ ಕನ್ನಡಿ ಇದೆ. ಅಂಥಹ ಪೋಲೀಸರನ್ನು ಕಂಡರೆ ಕೊಲ್ಲುವಷ್ಟು ಕೋಪ ಬರದಿದ್ದರೆ ಕೇಳಿ?
ನಿರ್ದೇಶನ ಮಾತ್ರವಲ್ಲದೆ, ಕೆಲ ಹಾಡುಗಳನ್ನು ಸಹ ಅರ್ಜುನ್ ಕೇಳುವಂತೆ ಬರೆದಿದ್ದಾರೆ. ಅದಕ್ಕೆ ಸೊಗಸಾಗಿ ಹರಿಕೃಷ್ಣ
ಸಂಗೀತ ಸಂಯೋಜಿಸಿದ್ದಾರೆ. ಹಳ್ಳಿ ಹೈದನ ಪ್ರಥಮ ಪ್ರಯತ್ನವನ್ನು ನೀವೂ ನೋಡಿ. ಇಷ್ಟವಗದಿದ್ದರೆ ಕೇಳಿ.
(ಅಂದ ಹಾಗೆ ಅರ್ಜುನ್ ನನಗಿಂತ ಎರಡು ಕ್ಲಾಸ್ ದೊಡ್ಡವರು. ಅವರ ಬಗ್ಗೆ ನನಗೆ ಗೊತ್ತು. ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ. ಆದ್ದರಿಂದ ಇದನ್ನು ಬರೆದದ್ದೂ ಸಹ ಅವರಿಗೆ ಗೊತ್ತಾಗುವುದಿಲ್ಲ. ನಮ್ಮೂರಿನ ಹುಡುಗ ಎಂಬ ಅಭಿಮಾನ ಈ ನಾಲ್ಕು ಮಾತುಗಳನ್ನು ಬರೆಸಿದೆ. ಪ್ರೀತಿಯಿಂದ ಅಂಬಾರಿ ನೋಡಿ. ಯುವಕರಿಗೆ ಪ್ರೆತ್ಸಾಹ ಕೊಟ್ಟಂತಾಗುತ್ತದೆ.)

Thursday, January 29, 2009

ಅವಸರವಿದ್ದಾಗ !

ನಮಗೆ ಅವಸರವಿದ್ದಾಗ ಎಲ್ಲ ವಾಹನಗಳು ನಿಧಾನಕ್ಕೆ ಹೋಗುತ್ತಿವೆ ಅನ್ನಿಸುತ್ತೆ ಯಾಕೆ?!

Saturday, January 17, 2009

ಯಾವ ಮೋಹನ ಮುರಳಿ ಕರೆಯಿತು...!?


ಇನ್ನೂ ಅದೆಷ್ಟು ಸಾವುಗಳನ್ನು ನೋಡಬೇಕೋ ನಾವು..!
ಆಗ ಪೂರ್ಣಚಂದ್ರ ತೇಜಸ್ವಿ. ಈಗ ನೆಚ್ಚಿನ ಗಾಯಕ ರಾಜು ಅನಂತಸ್ವಾಮಿ. ದಿಗಿಲಾಗುತ್ತದೆ. ಇನ್ನು ಬಾಳಿ ಬದುಕುವ
ವಯಸ್ಸಿರುವವರನ್ನು ಜವರಾಯ ತನ್ನ ಬಳಿಗೆ ಕರೆದುಕೊಳ್ಳುತ್ತಾನೆ ಎಂದರೆ ಏನರ್ಥ?! ತಪ್ಪು ನಮ್ಮದೋ, ಜವರಾಯನದೋ? ಸಾವು ಮಾತ್ರ ಯಾರನ್ನೂ ಬಿಟ್ಟಿಲ್ಲ; ಬಿಡುವುದೂ ಇಲ್ಲ.


ಹಾಡುವಾಗಲಾಗಲೀ, ಮಾತನಾಡುವಾಗಲಾಗಲೀ, ಕುಡಿಯುವಾಗಲಾಗಲೀ ಸದಾ ನಗುತ್ತಿದ್ದ ಪ್ರೀತಿಯ ರಾಜು,
ಜೀವನ- ಗಾಯನ ಮುಗಿಸಿದ್ದಾರೆ. ನಟನೆ ಗೊತ್ತಿತ್ತು. ಗಾಯನ ಗೊತ್ತಿತ್ತು. ಎಂತಹ ಹಾಡುಗಳನ್ನು ಬೇಕಾದರೂ ಹಾಡುವ ಸಾಮರ್ಥ್ಯವಿದ್ದ ರಾಜು, ಸುಗಮ ಸಂಗೀತವನ್ನು ಬೆಳೆಸಲು ಶ್ರಮಿಸುತ್ತಿದ್ದರು. ತಂದೆ ಮೈಸೂರು ಅನಂತಸ್ವಾಮಿ
ಪ್ರೇರಣೆಯಲ್ಲಿಯೇ ಕಾಯಕ ನಿರ್ವಹಿಸುತ್ತಿದ್ದ ರಾಜು ಇನ್ನು ನೆನಪು ಮಾತ್ರ ಎಂಬುದನ್ನು ನೆನೆಸಿಕೊಂಡರೆ....
------------
ಸುಗಮ ಸಂಗೀತ ಶಾಲೆ ಈಗ ಅನಾಥ!
ತಂದೆ ಮೈಸೂರು ಅನಂತಸ್ವಾಮಿಯವರ ಸ್ಮರಣಾರ್ಥ ತೆರೆದಿದ್ದ ಸುಗಮ ಸಂಗೀತ ಶಾಲೆ ಕೂಸಿನಲ್ಲಿಯೇ ಅನಾಥವಾಗಿದೆ. ಸ್ಥಾಪಕನನ್ನು ಕಳೆದುಕಂಡ ದುಃಖದಲ್ಲಿದೆ. ೧೫-೨೦ ವರ್ಷಗಳ ಕಾಲ ಸುಗಮ ಸಂಗೀತ ಕ್ಷತ್ರದಲ್ಲಿ ಗಾಯಕ, ನಿರ್ದೇಶಕ, ಸಂಗೀತ ಸಂಯೋಕರಾಗಿ ಮಾತ್ರವಲ್ಲದ, ಚಲನಚಿತ್ರಗಳಲ್ಲಿ ಹಾಸ್ಯನಟರಾಗಿಯೂ ಖ್ಯಾತಿ ಗಳಿಸಿದ್ದು ರಾಜು ಅನಂತಸ್ವಾಮಿ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಸುಗಮ ಸಂಗೀತ ಕಲಿಕಾ ತರಗತಿಗಳನ್ನು ಆರಂಭಿಸಿದ್ದರು. ಇದು ೨೦೦೭ರ ಮೇ ೧೯ ರಿಂದ ಆರಂಭವಾಗಿತ್ತು. ಸುಗಮ ಸಂಗೀತದ ಆಸಕ್ತಿ ಇರುವ
ಮಕ್ಕಳಿಗೆ ಖುದ್ದು ರಾಜುವೇ ಪಾಠ ಹೇಳುತ್ತಿದ್ದರು. ಇದರೊಂದಿಗೆ ಒಂದಷ್ಟು ಮಕ್ಕಳಿಗೆ ನಗುವ ಗುರುವಿನ ಸಾಂಗತ್ಯ ಸಿಕ್ಕಿತ್ತು. ಆದರೆ, ಒಂದಷ್ಟು ಮಕ್ಕಳಿಗೆ ಈ ಅವಕಾಶ ಲಭ್ಯವಾಗದಂತೆ ದೇವರೇ ಆಜ್ಞೆ ಹೊರಡಿಸಿದ್ದಾನೆ!
ಮಾತು ತಪ್ಪೆಲ್ಲ ಎಂದಿದ್ದರು...
ಅತಿಯಾದ ಮದ್ಯಪಾನದಿಂದಲೋ ಏನೋ ಆಗಾಗ ಆರೋಗ್ಯ ಕೈಕೊಡುತ್ತಿದ್ದುದರಿಂದ ಈ ಶಾಲೆ ಆರಂಭವೂ ವಿಳಂಬವಾಗಿತ್ತು. ೨೦೦೭ರ ಜನವರಿಯಲ್ಲಿ ಆರಂಭವಾಗಬೇಕಿದ್ದ ಶಾಲೆ, ಮೇನಲ್ಲಿ ಪ್ರಾರಂಭವಾಗಿತ್ತು. ಯಾವುದೇ ಸಮಾರಂಭ ಮಾಡದೇ, ಸರಳವಾಗಿ ಸರಸ್ವತಿ ಪೂಜೆ ಮಾಡಿ ಮುಗಿಸಿ, ಉದ್ಘಾಟನೆ ಮಾಡುವ ಮೂಲಕ ರಾಜು ಸರಳತೆಯನ್ನು ಪ್ರದರ್ಶಿಸಿದ್ದರು. ವದಲು ಅನಾರೋಗ್ಯದಿಂದಾಗಿ ಶಾಲೆ ಆರಂಭಿಸುವುದು ಸಾಧ್ಯವಾಗಿರಲಿಲ್ಲ. ಈ ಬಾರಿ ಮಾತು ತಪ್ಪೆಲ್ಲ ಎಂದಿದ್ದ ರಾಜು, ಮಾತು ಉಳಿಸಿಕಂಡಿದ್ದರು. ಈಗ ಅದೆಲ್ಲವನ್ನು ಬಿಟ್ಟಿದ್ದೇನೆ. ಇನ್ನು ಮುಂದೆ ಸಂಗೀತವಾಯಿತು; ನಾನಾಯಿತು ಎಂದು ಹೇಳಿದ್ದರಾದರೂ, ಹಾಗನು ಅವರು ನಡೆದುಕೊಳ್ಳಲಿಲ್ಲ. ಮದ್ಯಪಾನ ಅವರನ್ನು ಆವರಿಸಿತ್ತು. (ರಾಜು ಸಾವು ನಮ್ಮ ವಯಸ್ಸಿನಲ್ಲಿರುವ ಮದ್ಯಪ್ರಿಯರಿಗೆ ಪಾಠವೂ ಹೌದು!.)


೨೦೦೭ ರ ಏ.೩೦ ರಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ತಮ್ಮ ಶಾಲೆ ಆರಂಭದ ಬಗ್ಗೆ ಸುದ್ದಿಗೋಷ್ಠಿಗೆ ರಾಜು ಬಂದಿದ್ದರು. ಅಂದು ನಮ್ಮೆಲ್ಲರ ಒತ್ತಾಯದ ಮೇರೆಗೆ ಅಮೆರಿಕ ಅಮೆರಿಕ ಚಿತ್ರದ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನೂ ಹಾಡು ಹಾಡಿದ್ದರು. ತಮ್ಮ ಹಾಡಿನ ಭಾಗವನ್ನು ಮಾತ್ರ ಹಾಡಿದ್ದ ರಾಜು, ಉಳಿದದ್ದನ್ನು ಸಂಗೀತಾ ಕಟ್ಟಿ ಬಂದಾಗ ಅವರಿಂದ ಹೇಳಿಸಿ ಎಂದು ಹೇಳಿ ನಗೆತರಿಸಿದ್ದರು!
ಆದರೆ ಈಗ ಬಯಸಿದರೂ ರಾಜು ಹಾಡುವುದಿಲ್ಲ.... ಈಗಾಗಲೇ ಹಾಡಿರುವ ಹಾಡುಗಳನ್ನು ಕೇಳಿಯೇ ಸಂತೋಷ ಪಡಬೇಕು ನಾವು. ರಾಜು... ಯಾವ ಮೋಹನ ಮುರಳಿ ಕರೆಯಿತು ದೂರು ತೀರಕೆ ನಿನ್ನನು....?

Monday, December 22, 2008

ಇದು ವ್ಯವಹಾರ ಅಂದ್ರೆ...!


ನಮಗೆ ಬರುವ ಈ - ಮೇಲ್ ಗಳಲ್ಲಿ ಹಲವಾರು ಕಥೆಗಳಿರುತ್ತವೆ; ಕವಿತೆಗಳಿರುತ್ತವೆ; ಆಶ್ಚರ್ಯ ತರಿಸುವ ಸಂಗತಿಗಳು
ಇರುತ್ತವೆ. ಮೊನ್ನೆ ನಮ್ಮ ಹರೀಶಣ್ಣ ಕಳುಹಿಸಿದ ಮೇಲ್‌ನಲ್ಲಿ ಅಚ್ಚರಿಯ ಸಾಲುಗಳಿದ್ದವು. ಅದನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ. ಓದಿ ನೋಡಿ, ನಿಮಗೂ ಇಷ್ಟವಾಗಬಹುದು...

ಬ್ಯುಸಿನೆಸ್ ಲಾಜಿಕ್ಸ್ ಹೀಗಿರಬೇಕಂತೆ....
- ಅಪ್ಪ: ನಾನು ಆಯ್ಕೆ ಮಾಡಿರುವ ಹುಡುಗಿಯನ್ನೇ ನೀನು ಮದುವೆಯಾಗಬೇಕು.
- ಮಗ: ನನ್ನ ಪತ್ನಿಯಾಗುವವಳನ್ನು ನಾನೇ ಹುಡುಕಿಕೊಳ್ಳುತ್ತೇನೆ!.
- ಅಪ್ಪ: ಆದರೆ, ಆ ಹುಡುಗಿ ಬಿಲ್ ಗೇಟ್ಸ್‌ನ ಪುತ್ರಿ.
- ಮಗ: ಹೌದಾ... ವಿಷಯ ಹೀಗಿದ್ದರೆ ಓ...ಕೆ.
ನಂತರ ಅಪ್ಪ ಬಿಲ್‌ಗೇಟ್ಸ್ ಅವರಲ್ಲಿ ಪ್ರಸ್ತಾಪ ಇಡುತ್ತಾನೆ.
- ಅಪ್ಪ: ನಿಮ್ಮ ಮಗಳಿಗೆ ನನ್ನ ಬಳಿ ಗಂಡನಿದ್ದಾನೆ.
- ಬಿಲ್‌ಗೇಟ್ಸ್: ಆದರೆ, ನನ್ನ ಮಗಳಿಗಿನ್ನೂ ಮದುವೆಯ ವಯಸ್ಸಾಗಿಲ್ಲ!
- ಅಪ್ಪ: ಆದರೆ, ಈ ಯುವಕ ವಿಶ್ವಬ್ಯಾಂಕ್‌ನ ಉಪಾಧ್ಯಕ್ಷ.
- ಬಿಲ್‌ಗೇಟ್ಸ್: ಆಹಾ.. ವಿಷಯ ಹೀಗಿದ್ದರೆ ಓ...ಕೆ.
ಅಂತಿಮವಾಗಿ ಅಪ್ಪ ವಿಶ್ವಬ್ಯಾಂಕ್‌ನ ಅಧ್ಯಕ್ಷನನ್ನು ಕಾಣಲು ಹೋಗುತ್ತಾನೆ.
- ಅಪ್ಪ: ವಿಶ್ವಬ್ಯಾಂಕ್ ಉಪಾಧ್ಯಕ್ಷರಾಗಿ ಶಿಫಾರಸು ಮಾಡಲು ನನ್ನ ಬಳಿ ಒಬ್ಬ ಯುವಕನಿದ್ದಾನೆ.
- ಅಧ್ಯಕ್ಷ: ಆದರೆ, ನಮ್ಮಲ್ಲಿ ಈಗಾಗಲೇ ಅಗತ್ಯಕ್ಕಿಂತ ಹೆಚ್ಚಿನ ಉಪಾಧ್ಯಕ್ಷರಿದ್ದಾರೆ.
- ಅಪ್ಪ: ಆದರೆ, ಈ ಯುವಕ ಬಿಲ್ಗೆತ್ಸ್ ಅಳಿಯ.
- ಅಧ್ಯಕ್ಷ: ಹೌದಾ... ವಿಷಯ ಹೀಗಿದ್ದರೆ ಓ..ಕೆ.!
ನೋಡಿ ಸ್ವಾಮಿ ವ್ಯವಹಾರ ಮಾಡುವುದು ಎಂದರೆ ಹೀಗೆ!.
ನೀತಿ: ನಿಮ್ಮಲ್ಲಿ ಏನೂ ಇಲ್ಲದಿದ್ದರೂ, ಏನಾದರೂ ನೀವು ಪಡೆದುಕೊಳ್ಳಬಹುದು. ಆದರೆ, ಪಾಸಿಟಿವ್ ಆಗಿರಬೇಕು.
-----------------------------
ಮಾರ್ಕೆಟಿಂಗ್ ಎಂದರೇನು?
ನೀವು ಪಾರ್ಟಿಯಲ್ಲಿ ಸುಂದರವಾದ ಯುವತಿಯನ್ನು ನೋಡುತ್ತೀರಿ ಎಂದುಕೊಳ್ಳಿ. ಆಕೆಯ ಬಳಿಗ ಹೋಗಿ ಕೇಳಿ, ನಾನು ತುಂಬಾ ಶ್ರೀಮಂತ. ನನ್ನನ್ನು ಮದುವೆಯಾಗ್ತೀಯಾ!? - ಅದು ಮರ್ಕೆಟಂಗ್.

ಅಂತೆಯೇ ನೀವು ಸ್ನೇಹಿತರೊಂದಿಗೆ ಇದ್ದಾಗ ಸುಂದರವಾದ ಹುಡುಗಿಯನ್ನು ಕಂಡರೆ, ನಿಮ್ಮಲ್ಲಿದ್ದ ಒಬ್ಬ ಸ್ನೇಹಿತ ಆಕೆಯ ಬಳಿ ಹೋಗಿ, ನನ್ನ ಸ್ನೇಹಿತ ತುಂಬಾ ಧನಿಕ. ಆತನನ್ನು ಮದುವಯಾಗುವಿರಾ ಎಂದು ಕೇಳಿದರೆ- ಅದು ಜಾಹಿರಾತು.

ಪಾರ್ಟಿಯಲ್ಲಿ ಕಂಡ ಯುವತಿಯಿಂದ ಫನ್ ನಂಬರ್ ಪಡದು, ದಿನ ಕಳೆದ ನಂತರ ಫೋನ್‌ನಲ್ಲಿ ಮಾತನಾಡಿ, ಮದುವೆಯಾಗುವೆಯಾ ಎಂದು ಕೇಳಿದರೆ ಅದು- ಟೆಲಿ ಮಾರ್ಕೆಟಿಂಗ್.


ಪಾರ್ಟಿಯಲ್ಲಿ ಕಂಡ ಸುಂದರ ಯುವತಿಯ ಬಳಿ ಹೋಗಿ, ಪಾನೀಯ ಕುಡಿಸಿ, ಆಕೆ ಕೆಳಗೆ ಬೀಳಿಸಿದ ಬ್ಯಾಗ್ ಅನ್ನು ಎತ್ತಿಕಟ್ಟು ಕಾರ್‌ನಲ್ಲಿ ಕೂರಿಸಿಕಂಡು ಮನೆಗೆ ಕರೆದುಕೊಂಡು ಹೋಗುವಾಗ, ಮದುವೆಯಾಗವೆಯಾ ಎಂದು ಕೇಳಿದರೆ
- ಅದು ಸಾರ್ವಜನಿಕ ಸಂಪರ್ಕ.

ನೀವು ಪಾರ್ಟಿಯಲ್ಲಿ ಕಂಡ ಸುಂದರ ಯುವತಿ, ತಾನಾಗಿಯೇ ನಿಮ್ಮ ಬಳಿಗೆ ಬಂದು ನೀವು ತುಂಬಾ ಧನಿಕರಿದ್ದೀರಿ. ನಾನು ನಿಮ್ಮನ್ನು ಮದುವೆಯಾಗಲು ಇಚ್ಚಿಸುತ್ತೇನೆ ಎಂದು ಕೇಳಿದರೆ- ಅದು ಬ್ರಾಂಡ್ ರೆಕಗ್ನಿಷನ್.

ಪಾರ್ಟಿಯಲ್ಲಿ ಕಂಡ ಸುಂದರ ಯುವತಿಯನ್ನು ಮದುವಯಾಗುವೆಯ ಎಂದು ನೀವು ನೇರ ನೇರ ಕೇಳುತ್ತೀರಿ. ಆಗ ಆಕೆ ನಿಮ್ಮ ಕೆನ್ನೆಗೆ ನಯವಾಗಿ ಏಟು ಕೊಟ್ಟರೆ- ಅದು ಗ್ರಾಹಕರ ಫೀಡ್‌ಬ್ಯಾಕ್!.

Sunday, December 14, 2008

ಸುಂಕ ಗೀತೆ !

ಮೊನ್ನೆ ಮೇಲ್ ಚೆಕ್ ಮಾಡಿದ ಸಂದರ್ಭದಲ್ಲಿ ಒಂದು ಆಶ್ಚರ್ಯ ಕಾದಿತ್ತು. ಅದಕ್ಕೆ ಕಾರಣವಾದವರು ಸ್ನೇಹಿತ, ಬೆಂಗಳೂರಿನಲ್ಲಿ ಕಂಪ್ಯೂಟರ್‌ನೊಂದಿಗೆ ತೆಂಕಣ- ಬಡಗಣ ನೋಡುತ್ತಿರುವ ಟಿ.ವೈ. ಪ್ರಸಾದ್. ಅವರು ಕಳುಹಿಸಿದ್ದ ಟ್ಯಾಕ್ಸ್ ಪೊಯಮ್ ನನ್ನನ್ನು ಸಾಕಷ್ಟು ಚಿಂತನೆಗೆ ಹಚ್ಚಿತು. ಆ ಇಂಗ್ಲಿಷ್ ಪೊಯಂ ಅನ್ನು ನಾನು ಇಲ್ಲಿ ಸುಂಕ ಗೀತೆಯಾಗಿ ಇಲ್ಲಿ ಅನುವಾದ ಮಾಡುವ ಪ್ರಯತ್ನ ಮಾಡಿದ್ದೇನೆ. ಓದಿ ನೋಡಿ, ನಾವು ಎಷ್ಟೊಂದು ಸುಂಕದೊಳಗೆ ಜೀವನ ನಡೆಸುತ್ತಿದ್ದೇವೆ ಎಂಬುದರ ಮೇಲೆ ಈ ಗೀತೆ ಬೆಳಕು ಚೆಲ್ಲುತ್ತದೆ... ನಿಮಗೆ ಇದು ಹಾಸ್ಯ ಎಂಬ ಆಶ್ಚರ್ಯವೂ ಉಂಟಾಗಬಹುದು...

ಅವನ ನೆಲಕ್ಕೂ ತೆರಿಗೆ
ಅವನ ಹಾಸಿಗೆಗೂ ತರಿಗೆ
ಆತ ತಿನ್ನುತ್ತಿರುವ ಟೇಬಲ್‌ಗೂ ತೆರಿಗೆ

ಅವನ ಟ್ರಾಕ್ಟರ್‌ಗೂ ತೆರಿಗೆ
ಅವನ ಹೇಸರಗತ್ತೆಗೂ ತೆರಿಗೆ
ಅವನಿಗೆ ಕಲಿಸಲು, ನಿಯಮಗಳನ್ನು ಹೇಳಲು ತೆರಿಗೆ

ಅವನ ಕೆಲಸಕ್ಕೂ ತೆರಿಗೆ
ಅವನ ಸಂಬಳಕ್ಕೂ ತೆರಿಗೆ
ಅಂತೂ ಇಂತೂ ಅವನು ಕೆಲಸ ಮಾಡಿದರೆ
ಅಂತಿಮವಾಗಿ ಸಿಗುವುದು ಶೇಂಗಾವಷ್ಟೆ!

ಅವನ ದನಕ್ಕೂ ತೆರಿಗೆ
ಅವನ ಕುರಿಗೂ ತೆರಿಗೆ
ಅವನ ಪ್ಯಾಂಟ್‌ಗೂ ತೆರಿಗೆ
ಅವನ ಟೈಗೂ ತೆರಿಗೆ
ಅವನ ಶರ್ಟಿಗೂ ತೆರಿಗೆ
ಅವನ ಕಸಕ್ಕೂ ತೆರಿಗೆ

ಅವನ ತಂಬಾಕಿಗೂ ತೆರಿಗೆ
ಅವನ ಕುಡಿತಕ್ಕೂ ತೆರಿಗೆ
ಅವನು ಚಿಂತಿಸಲು ಪ್ರಯತ್ನಿಸಿದರೂ ತೆರಿಗೆ!

ಅವನ ಸಿಗರೇಟಿಗೂ ತೆರಿಗೆ
ಅವನ ಬಿಯರ್‌ಗೂ ತೆರಿಗೆ
ಅವನು ಅತ್ತನೆಂದರೆ ಅನ ಕಣ್ಣೀರಿಗೂ ತೆರಿಗೆ

ಅವನ ಕಾರಿಗೂ ತೆರಿಗೆ
ಅವನ ಅನಿಲಕ್ಕೂ ತೆರಿಗೆ
ಇತರೆ ಮಾರ್ಗ ಹುಡುಕ ಹೋದರೆ ಅವನ ಪುಷ್ಠಕ್ಕೂ ತೆರಿಗೆ
ಏನೇನು ತೆರಿಗೆ ಇದೆ ಎಂದು ತಿಳಿದುಕೊಳ್ಳಲು
ಹದರೆ ಅವನಿಗೆ ಅದಕ್ಕೂ ತರಿಗೆ!

ಅಂತಿಮವಾಗಿ ಅವನ ಶವಸಂಸ್ಕಾರಕ್ಕೂ ತೆರಿಗೆ
ಅದನ್ನ ಮಾಡಿದ ನೆಲಕ್ಕೂ ತೆರಿಗೆ
ಆತನ ಸಮಾದಿಯ ಮೇಲೆ ಹೀಗೆ ಬರೆಯಬೇಕು-
ನನ್ನನ್ನು ಕೊನೆವರೆಗೂ ತೆರಿಗೆ ಸವಾರಿ ಮಾಡಿತು...

ಆತನ ಪ್ರಾಣ ಹೋಯಿತಂದರೆ
ಆಗಲೂ ವಿಶ್ರಾಂತಿ ಇಲ್ಲ,
ಅದು ಆತ ಹೊಂದಿದ್ದ ಪಿತ್ರಾರ್ಜಿತ
ಆಸ್ತಿ ಮೇಲೆ ತೆರಿಗೆ ಹಾಕಲು ಸುಸಂದರ್ಭ!

ಅಕೌಂಟ್ಸ್ ರಿಸಿವೇಬಲ್ ಟ್ಯಾಕ್ಸ್
ಏರ್‌ಲೈನ್ ಸರ್ಚಾಜ್ ಟ್ಯಾಕ್ಸ್
ಏರ್‌ಲೈನ್ ಫ್ಯೂಯೆಲ್ ಟ್ಯಾಕ್ಸ್
ಏರ್‌ಪೋರ್ಟ್ ನಿರ್ವಹಣಾ ತೆರಿಗೆ
ಕಟ್ಟಡ ಅನುಮತಿ ತೆರಿಗ
ಸಿಗರೇಟ್ ತೆರಿಗೆ
ಕಾರ್ಪೋರೇಟ್ ಆದಾಯ ತೆರಿಗೆ
ಮರಣ ತೆರಿಗೆ
ನಾಯಿ ಹೊಂದಲು ಪರವಾನಗಿ ತೆರಿಗೆ
ವಾಹನ ಅನುಮತಿ ತೆರಿಗೆ
ಎಕ್ಸೈಸ್ ತೆರಿಗೆ
ಫೆಡರಲ್ ಆದಾಯ ತರಿಗೆ
ಫೆಡರಲ್ ಅನ್‌ಎಂಪ್ಲಾಯಮೆಂಟ್ (ಯುಐ)
ಫಿಶಿಂಗ್ ಪರವಾನಗಿ ತೆರಿಗೆ
ಆಹಾರ ಪರವಾನಗಿ ತೆರಿಗೆ
ಪೆಟ್ರಲ್ ತೆರಿಗೆ
ಗ್ರಾಸ್ ರಿಸಿಪ್ಟ್ಸ್ ತೆರಿಗೆ
ಆರೋಗ್ಯ ತೆರಿಗೆ
ಬೇಟೆಯಾಡಲು ಪರವಾನಗಿಗೆ ತೆರಿಗೆ
ಹೈಡ್ರೋ ತೆರಿಗೆ
ಪಿತ್ರಾರ್ಜಿತ ಆಸ್ತಿಗೆ ತೆರಿಗೆ
ಬಡ್ಡಿ ತೆರಿಗೆ
ಮದ್ಯ ತೆರಿಗೆ
ಐಷಾರಾಮಿ ತೆರಿಗೆ
ವಿವಾಹ ಅನುಮತಿ ತರಿಗೆ
ವೈದ್ಯಕೀಯ ಸೌಲಭ್ಯಕ್ಕೆ ತೆರಿಗೆ
ಮಾರ್ಟೇಜ್ ತೆರಿಗೆ
ವೈಯಕ್ತಿಕ ಆದಾಯ ತರಿಗೆ
ಆಸ್ತಿ ತೆರಿಗೆ
ಬಡತನ ತೆರಿಗೆ
ಔಷಧಿಗಳಿಗೆ ತೆರಿಗೆ
ಪ್ರಾವಿನಿಷಿಯಲ್ ಆದಾಯ ತರಿಗೆ
ರಿಯಲ್ ಎಸ್ಟೇಟ್ ತೆರಿಗ
ರೀಕ್ರಿಯೇಷನಲ್ ವಾಹನ ತೆರಿಗೆ
ರೀಟೇಲ್ ಸೇಲ್ಸ್ ತೆರಿಗೆ
ಸರ್ವಿಸ್ ಚಾರ್ಜ್ ತೆರಿಗೆ
ಶಾಲಾ ತೆರಿಗೆ
ದೂರವಾಣಿ ತೆರಿಗೆ
ದೂರವಾಣಿ, ಪ್ರಾವಿನ್ಸಿಯಲ್ ಮತ್ತು ಸರ್‌ಚಾರ್ಜ್ ತೆರಿಗೆ
ದೂರವಾಣಿ ಕನಿಷ್ಟ ಬಳಕೆಗೆ ಸರ್ಚಾರ್ಜ್ ತೆರಿಗೆ
ವಾಹನ ಪರವಾನಗಿ ನೋಂದಣಿ ತೆರಿಗೆ
ನೀರಿನ ಕಂದಾಯ
ವಾಟರ್‌ಕ್ರಾಫ್ಟ್ ನೋಂದಣಿ ತೆರಿಗೆ
ವಾಹನ ಮಾರಾಟ ತೆರಿಗೆ
ಬಾವಿ ತೆಗೆಯಲು ಅನುಮತಿ ತೆರಿಗೆ
ಕಾರ್ಮಿಕರ ಪರಿಹಾರ ತೆರಿಗೆ
ನೀವು ಇನ್ನೂ ಇದು ಹಾಸ್ಯ ಎಂದು ಯೋಚಿಸುತ್ತಿದ್ದೀರಾ?

ನಿಮಗೂ ಗೊತ್ತು ನಮ್ಮ ದೇಶದಲ್ಲಿ ೧೦೦ ವರ್ಷಗಳ ಹಿಂದೆ ಯಾವುದೇ ಸುಂಕ/ ತೆರಿಗೆ ಇರಲಿಲ್ಲ. ಒಂದರ್ಥದಲ್ಲಿ ನಾವು ಅಭಿವೃದ್ಧಿ ಹೊಂದುತ್ತಿರುವ ದೇಶದವರಾಗಿದ್ದೆವು. ದೇಶದ ಮೇಲೆ ಯಾವುದೇ ಸಾಲವೂ ಇರಲಿಲ್ಲ. ಸಾಕಷ್ಟು ಮಧ್ಯಮವರ್ಗದವರೇ ವಾಸಿಸುತ್ತಿರುವ ನಮ್ಮಲ್ಲಿ ಆಗ; ತಾಯಂದಿರು ಮನೆಯಲ್ಲಿಯೇ ಇದ್ದುಕೊಂಡು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಕ್ಕಳಿಗಾಗಿ ಮನೆಯಲ್ಲಿಯೇ ಇರುತ್ತಿದ್ದರು!

ಆದರೆ ಈಗ ಏನಾಗಿದೆ?
ಎಲ್ಲರೂ ಜೋರಾಗಿ ಹೇಳಿ, ಇದಕ್ಕೆ ಕಾರಣರು ಯಾರು?
ಉತ್ತರ- ರಾಜಕಾರಣಿಗಳು?!

Thursday, December 4, 2008

ಅಯ್ಯಪ್ಪಸ್ವಾಮಿ ಎಂದರೆ ಆಕೆ ನೆನಪಾಗುತ್ತಾರೆ...!


ಮತ್ತೊಂದು `ಅಯ್ಯಪ್ಪನ ಋತು' ಬಂದಿದೆ. ಈ ಸಂದರ್ಭದಲ್ಲಿ ನಮ್ಮೂರಿನಲ್ಲಿ ನಡೆದ ದುರಂತ ಕಥೆ ನೆನಪಾಗುತ್ತದೆ; ಕಾಡುತ್ತದೆ. ಆಗ ಆಕೆ ನೆನಪಾಗುತ್ತಾರೆ!
ಏನಾಗಿತ್ತು ಎಂದರೆ - ಅದೊಂದು ಪುಟ್ಟ ಕುಂಟುಂಬ. ಯಜಮಾನ ಜಯಣ್ಣ ನಾಲೆಯಲ್ಲಿ ನೀರು ಬಿಡುವ ಕೆಲಸ ಮಾಡುವವನು- ಸರ್ಕಾರಿ ಕೆಲಸ. ಪತ್ನಿ ಗೃಹಿಣಿ. ಒಂದು ಗಂಡು- ಒಂದು ಹೆಣ್ಣು. ಶಾಲೆಗ ಹೋಗುತ್ತಿದ್ದವು.
ಈಚೆಗೆ ಸುಮಾರು ೯-೧೦ ವರ್ಷಗಳ ಹಿಂದಿನ ಕಥೆ ಅದು. ಅವರ ಮನೆಯಲ್ಲಿ ಸಂಭ್ರಮವಿತ್ತು; ಭಕ್ತಿಯೂ ಇತ್ತು. ಮನೆಯವರು ಶಬರಿಮಲೆಗೆ ಹೋಗುತ್ತಿದ್ದಾರೆ. ಹಲವಾರು ದಿನಗಳಿಂದ ಮನೆಯ ಸಹವಾಸಕ್ಕೆ ಬಂದೇ ಇಲ್ಲ. ಭಕ್ತಿಯಲ್ಲಿ ಮಿಂದುತ್ತಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ತಣ್ಣೀರಿನಲ್ಲಿ ಸ್ನಾನ ಮಾಡುತ್ತಾರೆ. ಭಜನೆ ಮಾಡುತ್ತಾರೆ.
ದೇವರು ಕೊನೆಗೂ ಭಕ್ತಿ ಭಾವನೆ ಬೆಳೆಸಿದ್ದಾನೆ ಎಂದು ಆಕೆ ಖುಷಿ ಪಟ್ಟಿದ್ದರು. ಊರಿನಲ್ಲಿ ಯಾರ ಸಹವಾಸಕ್ಕೂ ಹೋಗದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದ ಅವರು, ಮಾಲೆ ಧರಿಸಿದ್ದ ಸಂದರ್ಭದಲ್ಲಿ ಮತ್ತಷ್ಟು ಮೌನಿಯಾಗಿದ್ದರು.
ಅಂತೂ ಒಂದು ವಾರ ಕಳೆದಿತ್ತು. ಇರುಮುಡಿಯನ್ನು ಕಟ್ಟಲು ಭರ್ಜರಿಯಾಗಿ ಕಾರ್ಯಕ್ರಮವೂ ನಡೆಯಿತು. ಸಂಬಂಧಿಕರು, ಮನೆಮಂದಿ ಎಲ್ಲಾ ಶುಭ ಹಾರೈಸಿ ಅವರನ್ನು ಶಬರಿಮಲೆ ಬಸ್ಸು ಹತ್ತಿಸಿದ್ದರು. ಇತ್ತ ಮಕ್ಕಳು, ನಮ್ಮಪ್ಪ ಶಬರಿಮಲೆಗೆ ಹೋಗಿದ್ದಾರೆ. ಒಂದಷ್ಟು ಆಟಿಕೆಗಳು, ಬಟ್ಟೆ ಬರೆ, ತಿನಿಸುಗಳನ್ನು ತರಬಹುದು ಎಂಬ ಕಾತರದಲ್ಲಿ ದಾರಿ ಕಾಯುತ್ತಿದ್ದರು. ಅಬ್ಬಬ್ಬಾ ಎಂದರೆ ಒಂದು ವಾರ ಕಾಲ ಪ್ರವಾಸವಿರುತ್ತದೆ. ನಂತರ ಬರುತ್ತೇನೆ ಎಂದು ಹೇಳಿ ಹೋಗಿದ್ದರು ಆತ.
ವಾರವಾಯಿತು. ಹತ್ತು ದಿನವಾಯ್ತು. ಅರ್ಧ ತಿಂಗಳಾಯ್ತು. ತಿಂಗಳೂ ತುಂಬಿತು. ಜಯಣ್ಣನ ಸುಳಿವಿಲ್ಲ. ಸಂಪರ್ಕಕ್ಕೆ ದೂರವಾಣಿ ಇಲ್ಲ. ಮೊಬೈಲ್ ಅಂತೂ ದೂರದ ಮಾತು. ಅವರ ಪತ್ನಿಗೆ ಗಾಬರಿಯಾಯಿತು. ಗಂಡ ಏನಾದರೋ ಏನೋ? ಶಬರಿ ಮಲೆಗೆ ಹೋಗಿ ಬರುವುದಾಗಿ ಹೇಳಿದವರು ತಿಂಗಳಾದರೂ ಬಂದಿಲ್ಲ; ಅವರ ಸಂಕಟ ಆರಂಭವಾಗಿದ್ದೇ ಅಂದಿನಿಂದ. ಹುಡುಕಿದರು. ಹುಡುಕಿಸಿದರು. ಪೊಲೀಸರಿಗೆ ದೂರು ನೀಡಿದರು. ಸಂಬಂಧಿಕರಂದಿಗೆ ಶಬರಿಮಲೆಗೂ ಹೋಗಿ ಬಂದದ್ದಾಯಿತು. ಅಷ್ಟೊಂದು ಭಕ್ತರಿರುವ
ಶಬರಿಮಲಯಲ್ಲಿ ಜಯಣ್ಣರೊಬ್ಬರನ್ನು ಹುಡುಕುವುದು ಸುಲಭವೇನಲ್ಲ. ಎಷ್ಟು ದಿನವೆಂದು ಅಳುತ್ತಾ ಕೂರಲಾಗುವುದು? ಅಳುವುದಕ್ಕೆ ಕಣ್ಣೀರು ಸಹ ಇರಲಿಲ್ಲ; ದಿನ ಅಳುವವರಿಗೆ ಕಣ್ಣೀರು ಉತ್ಪತ್ತಿ ಮಾಡುವವರ್‍ಯಾರು?
ದಿನ ಕಳೆದವು. ಮೂರು ತಿಂಗಳಾಯಿತು, ವರ್ಷವಾಯಿತು. ಊರಿನವರೆಲ್ಲಾ ಅವರ ಸ್ಥಿತಿ ಕಂಡು ಮರುಗಿದರು. ಮುಖಂಡರು ಸಂಗತಿಯನ್ನು ನೀರಾವರಿ ಇಲಾಖೆಯ ಗಮನಕ್ಕೆ ತಂದರು. ಕಾಡಿಬೇಡಿದ್ದರಿಂದಾಗಿ, ಪತಿಯ ಕೆಲಸ ಪತ್ನಿಗೆ ಸಿಕ್ಕಿತು. ಗಂಡ ಬದುಕಿದ್ದಾನೋ, ಸತ್ತಿದ್ದಾನೋ ಏನೋ ಎಂಬ ಗೊಂದಲದಲ್ಲಿ ಇರುವ ಆಕೆ ಯಾವಾಗಲೂ ಮುಡಿ ತುಂಬ ಹೂವು ಮುಡಿಯುತ್ತಾರೆ. ಆಕೆಗೆ ನೀರಾವರಿ ಇಲಾಖೆಯು ಮೈಸೂರು ಕಚೇರಿಯಲ್ಲಿ ಸಹಾಯಕಿಯ ಕೆಲಸ ನೀಡಿದೆ.
ಈ ಎಲ್ಲದರ ನಡುವೆ ಮಕ್ಕಳು ಅಪ್ಪ ಏನಾದನೋ ಎಂಬ ಚಿಂತಯಲ್ಲಿಯೇ ಬೆಳೆದು ದೊಡ್ಡವರಾಗಿದ್ದಾರೆ. ಒಂದಷ್ಟು ಓದಿಕಂಡು, ತಾಯಿಯೊಂದಿಗೆ ಕುಟುಂಬ ನಿರ್ವಹಣೆಗೆ ಕೈಜೋಡಿಸಲು ಕೈಲಾದ ಕೆಲಸ ಮಾಡುತ್ತಿದ್ದಾರೆ. ಆಕೆ, ಸಹಾಯಕಿ ಕೆಲಸ ಮಾಡಿಕಂಡೇ ಜೀವನ ಸಾಗಿಸುತ್ತಿದ್ದಾರೆ. ಬೆಳೆದು ನಿಂತ ಮಗಳ ಮದುವೆ ಮಾಡಿ ಮುಗಿಸಿದ್ದಾರೆ. ಮಗ ಇದ್ದಾನೆ. ಮುರುಗೇಶ. ಸಹಜವಾಗಿಯೇ ಆತ ಕೆಲಸಕ್ಕಾಗಿ ಬೆಂಗಳೂರಿನಲ್ಲಿ ಇದ್ದಾನೆ. ಆಗಾಗ ಬಂದು ತಾಯಿಯನ್ನು ನೋಡಿ ಹೋಗುತ್ತಾನೆ. ಆಕೆಯ ಅಕ್ಕನಿಗೂ ಒಂದು ಮಗುವಾಗಿದೆ.
ಮಗ-ಮಗಳು ಬೆಳೆದು ದೊಡ್ಡವರಾಗಿದ್ದಾರೆ. ಮಗಳಿಗೆ ಮದುವೆಯೂ ಆಗಿದೆ. ಮೊಮ್ಮಗು ಸಹ ಇದೆ. ಆದರ, ಜಯಣ್ಣನ ಸುಳಿವಿಲ್ಲ! ಆಕೆ, ಕೆಲಸ ಮಾಡುತ್ತಿದ್ದಾರೆ- ಪತಿಯ ನೆನಪಿನಲ್ಲಿ- ಎಲ್ಲೋ ಹೋಗಿದ್ದಾರೆ ಬರುತ್ತಾರೆ ಎಂಬ ಭಾವನೆಯಲ್ಲಿ! ಜಯಣ್ಣ ಏನಾದನೋ? ಎಲ್ಲಿ ಹೋದನೋ ಇನ್ನೂ ಗೊತ್ತಿಲ್ಲ. ಆದರೆ, ಅವರ ಕುಟುಂಬ ಮಾತ್ರ ಅವರು ಬರುತ್ತಾರೆ ಎಂದು ನಂಬಿದೆ. ಊರಿನವರು ಮಾತ್ರ ಆತನ ಕಥೆ ಮುಗಿದು ಹೋಗಿದೆ ಎಂದುಕೊಂಡಿದ್ದಾರೆ.
ಇಂತಹ ಕಥೆ ಕೇಳಿದರೆ, ಮನಸ್ಸು ಒದ್ದೆಯಾಗದೆ ಇರಲಿಕ್ಕಿಲ್ಲ. ಡಿಸೆಂಬರ್- ಜನವರಿ ಬಂತೆಂದರೆ ಈ ಘಟನೆ ಮನಸ್ಸು ತಟ್ಟುತ್ತದೆ. ಶಬರಿಮಲೆಯ ಅಯ್ಯಪ್ಪ- ನಿನ್ನ ನೋಡಲು ಬಂದ ಭಕ್ತರಿಗೆ ಈ ಶಿಕ್ಷ ನೀಡುವುದೇ ಎಂಬ ಪ್ರಶ್ನೆ ಬರುತ್ತದೆ. ಅಯ್ಯಪ್ಪ ಉತ್ತರಿಸುತ್ತಾನಾ?! (ನಮ್ಮ ಹರೀಶಣ್ಣ ಅಯ್ಯಪ್ಪಸ್ವಾಮಿ ಕಾಣಲು ಶಬರಿಮಲೆಗೆ ಹೋಗಿದ್ದಾರೆ. ಸುಖವಾಗಿ ಇದ್ದು ಬರಲಿ ಎಂಬ ಆಶಯದಲ್ಲಿ ಬರೆದದ್ದು...)